ಬೇಟ್ಸ್, ಹೆನ್ರಿ ವಾಲ್ಟರ್
1825-92. ಪ್ರಸಿದ್ಧ ಪ್ರಕೃತಿ ವಿಜ್ಞಾನಿ. ಇಂಗ್ಲೆಂಡಿನ, ಲೆಸ್ಟರ್‍ನಲ್ಲಿ 1825ರ ಫೆಬ್ರವರಿ 8ರಂದು ಜನನ. ಸುಪ್ರಸಿದ್ಧ ಪ್ರಕೃತಿ ವಿಜ್ಞಾನಿ ಆಲ್‍ಫ್ರೆಡ್ ರಸಲ್ ವಾಲ್ಲೆಸ್‍ನನ್ನು ಭೇಟಿಯಾಗಿ (1844) ಆತನೊಡನೆ ಶಿಷ್ಯವೃತ್ತಿ ಕೈಗೊಂಡ. 1848ರಲ್ಲಿ ವಾಲ್ಲೆಸನೊಡಗೂಡಿ ದಕ್ಷಿಣ ಅಮೆರಿಕದ ಬ್ರಜಿಲ್ ಹಾಗೂ ಅಮೆಜಾನ್ ನದಿಯ ಕೊಳ್ಳಗಳಲ್ಲಿ ಸಂಚರಿಸಿ ಹಲವಾರು ಪ್ರಾಣಿಗಳನ್ನೂ ಸಸ್ಯಗಳನ್ನೂ ಸಂಗ್ರಹಿಸಿದ. ಇವರ ಪ್ರಯಾಣದ ಉದ್ದೇಶ ಪ್ರಭೇದೋದ್ಭವದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದಾಗಿತ್ತು. ಅಮೆಜಾನ್ ನದಿಯ ಕೊಳ್ಳಗಳಲ್ಲಿ ಸತತ ಏಳೂವರೆ ವರ್ಷ ಪರ್ಯಂತ ಸಂಚರಿಸಿ ಶೋಧಿಸಿ ತೆಗೆದ ಸಂಗ್ರಹಗಳೊಡನೆ 1859ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿದ. ಈತ ಸಂಗ್ರಹಿಸಿದ 14,712 ರೇಟ ಪ್ರಭೇದಗಳಲ್ಲಿ ಸುಮಾರು 8,000ಕ್ಕೂ ಹೆಚ್ಚು ವಿಜ್ಞಾನಪ್ರಪಂಚಕ್ಕೆ ಹೊಸ ಕೊಡುಗೆಯಾದುವು. ಈ ಸಂಗ್ರಹದಿಂದಾಗಿ ಈತನಿಗೆ ಎಂಟುನೂರು ಪೌಂಡು ಹಣದೊರಕಿತು. 1861ರಲ್ಲಿ ಈತ ಲಿನ್ನೆ ಸಂಘದಲ್ಲಿ ತನ್ನ ಕಾಂಟ್ರಿಬ್ಯೂಷನ್ ಟು ಆನ್ ಇನ್‍ಸೆಕ್ಟ್ ಫಾನ್ ಆಫ್ ಅಮೆಜಾನ್ ವ್ಯಾಲಿ ಎಂಬ ಲೇಖನ ಓದಿದ. ಇದರಲ್ಲಿ ಹೊಸ ರೇಟ ಪ್ರಭೇದಗಳ ವಿವರಣೆಯೂ ಪ್ರಾಣಿಗಳಲ್ಲಿ ಕಂಡುಬರುವ ಅನುಕರಣೆಯ ಬಗೆಗಿನ ವಿವರಣೆಯೂ ಇದೆ. ಇದನ್ನು ಓದಿದ ಚಾಲ್ರ್ಸ್ ಡಾರ್ವಿನ್ ಮತ್ತು ಜೋಷೆಫ್ ಹೂಕರ್‍ರಂಥ ಮೇಧಾವಿಗಳೂ ಸಹ ಪ್ರಭಾವಿತರಾಗಿ ಈತನೊಂದಿಗೆ ದೀರ್ಘ ಪತ್ರವ್ಯವಹಾರ ಮಾಡಿದ್ದರು. 1863ರಲ್ಲಿ ಈತನ ದಿ ನ್ಯಾಚುರಲಿಸ್ಟ್ ಆನ್ ದಿ ರಿವರ್ ಆಫ್ ಅಮೆಜಾನ್ ಕೃತಿ ಪ್ರಕಟವಾಯಿತು. ಈ ಪುಸ್ತಕಕ್ಕೆ ಚಾಲ್ರ್ಸ್ ಡಾರ್ವಿನ್ ಉಪಯುಕ್ತ ಮುನ್ನುಡಿ ಬರೆದಿದ್ದಾನೆ. ಜಾನ್ ಮುರ್ರೆ ಎಂಬಾತ ಈ ಪುಸ್ತಕವನ್ನು ಪ್ರಕಟಿಸಿದನಲ್ಲದೆ 1864ರಲ್ಲಿ ರಾಯಲ್ ಜಿಯೋಗ್ರಾಫಿಕ್ ಸೊಸೈಟಿಯಲ್ಲಿಯ ಸಹಾಯಕ ಕಾರ್ಯದರ್ಶಿ ಹುದ್ದೆ ದೊರೆಯುವಂತೆ ಮಾಡಿದ. ಇದರಿಂದ ಬೇಟ್ಸ್‍ನಿಗೆ ಯಾವ ಆರ್ಥಿಕ ತೊಂದರೆಯೂ ಇಲ್ಲದೆ ಸಂಶೋಧನೆ ಮುಂದುವರಿಸಲು ಅನುಕೂಲವಾಯಿತು. 1881ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ನೇಮಕಗೊಂಡ ಈತ ಹಲವಾರು ಸಂಶೋಧನ ಲೇಖನಗಳನ್ನು ಬರೆದ. 1892 ಫೆಬ್ರುವರಿ 16ರಂದು ಲಂಡನ್ನಿನಲ್ಲಿ ಮರಣ ಹೊಂದಿದ. 
(ಎಸ್.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ